ರಾಮಚಂದ್ರರಾವ್, ಟಿ ಎಸ್ 1922 - 77. ಪ್ರಸಿದ್ಧ ಪತ್ರಿಕೋದ್ಯಮಿ. ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ 1922 ರಲ್ಲಿ ಜನಿಸಿದರು. ತಂದೆ ಸೂರ್ಯನಾರಾಯಣರಾಯ, ತಾಯಿ ಬನಶಂಕರಮ್ಮ. ಬಾಲ್ಯದಲ್ಲೇ ಪಿತೃ ವಿಯೋಗವಾಗಿ ಅಕ್ಕನ ಆಶ್ರಯದಲ್ಲಿ ಬೆಳೆದರು. ಪರಶುರಾಮಪುರದಲ್ಲಿ ಶಿವಮೊಗ್ಗದಲ್ಲಿ ಪ್ರೌಢಶಾಲೆಗೆ ಸೇರಿದರು ಅನಂತರ ಅಗ ಮೈಸೂರಿನಲ್ಲಿದ್ದ ಪ್ರಥಮ ದರ್ಜೆ ಕಾಲೇಜಿನಲ್ಲಿ (ಇಂದಿನ ಯುವರಾಜ ಕಾಲೇಜು) ಓದು ಮುಂದುವರಿಸಿದರು. ಸೀನಿಯರ್ ಇಂಟರ್‍ಮೀಡಿಯೆಟ್ ತರಗತಿಯಲ್ಲಿದ್ದಾಗ ಕಾಯಿಲೆ ಬಿದ್ದು ಚೇತರಿಸಿಕೊಳ್ಳುತ್ತಿದ್ದಂತೆ, ಬೆಂಗಳೂರಿನಲ್ಲಿದ್ದ ತಾಯಿಯ ಅನಾರೋಗ್ಯ ನಿಮಿತ್ತ ಓದು ನಿಲ್ಲಿಸಿ ತಾಯಿಯ ಸೇವೆಗೆ ನಿಂತರು.

ಪ್ರಥಮವಾಗಿ ತಿಂಗಳಿಗೆ 15 ರೂಪಾಯಿ ಸಂಬಳದ ಮೇಲೆ ಒಬ್ಬ ಟೀ ಪ್ರಚಾರಕರಾಗಿ ಕೆಲಸಕ್ಕೆ ಸೇರಿದರು. 1943 ರ ಸುಮಾರಿನಲ್ಲಿ ಈ ಕೆಲಸ ಬಿಟ್ಟು ಬೆಂಗಳೂರಿನ ಕಬ್ಬನ್ ಪೇಟೆಯಲ್ಲಿ ಒಂದು ದಿನಸಿ ಅಂಗಡಿ ಇಟ್ಟರು. ಇವೆಲ್ಲ ಚಟುವಟಿಕೆಗಳ ಮಧ್ಯೆ ಪುಸ್ತಕಗಳನ್ನು ಓದುವ ಅಭ್ಯಾಸ ಬಿಟ್ಟಿರಲಿಲ್ಲ. ಎಂ. ಶಿವರಾಂ (ರಾಶಿ) ಅವರ ಪ್ರೋತ್ಸಾಹದಿಂದ ಕೊರವಂಜಿ ಪತ್ರಿಕೆಗೆ ಲೇಖನಗಳನ್ನು ಬರೆಯಲಾರಂಭಿಸಿದರು. ಕೊರವಂಜಿಯ ಮತ್ತೊಬ್ಬ ಬರೆಹಗಾರರಾಗಿದ್ದ ರಾಮಸ್ವಾಮಿಯವರೊಡನೆ ಸೇರಿ ಮೂನ್‍ಲೈಟ್ ಎಂಬ ಇಂಗ್ಲಿಷ್ ಚಲನಚಿತ್ರ ಪತ್ರಿಕೆಯನ್ನು ಪ್ರಾರಂಭಿಸಿದರು. ಪತ್ರಿಕೆ ಹೆಚ್ಚುಕಾಲ ಮುಂದುವರಿಯಲಿಲ್ಲ. ಈ ಹೊತ್ತಿಗೆ (1948) ಪ್ರಜಾವಾಣಿ ಪ್ರಾರಂಭವಾದದ್ದರಿಂದ ಅದರ ಉಪ ಸಂಪಾದಕರಾಗಿ ಸೇರಿದರು.

ಪ್ರಜಾವಾಣಿಯ ಪ್ರಥಮ ಸಂಪಾದಕರಾಗಿದ್ದ ಬಿ. ಪುಟ್ಟಸ್ವಾಮಯ್ಯನವರು ನಿವೃತ್ತರಾದ ಮೇಲೆ ಸಿ. ಜಿ. ಕೆ. ರೆಡ್ಡಿಯವರು ಸಂಪಾದಕರಾಗಿಯೂ ಖಾದ್ರಿ ಶಾಮಣ್ಣನವರು ಸಹಸಂಪಾದಕರಾಗಿಯೂ ಕೆಲಸ ಮಾಡಲಾರಂಭಿಸಿದರು. ಇವರಿಬ್ಬರೂ ಕೆಲಸ ಬಿಟ್ಟಮೇಲೆ ಟಿ. ಎಸ್. ರಾಮಚಂದ್ರರಾವ್ ಅವರನ್ನು ಸಂಪಾದಕರನ್ನಾಗಿ ನೇಮಿಸಲಾಯಿತು. ಅಗ ಇವರಿಗೆ ಕೇವಲ ಇಪ್ಪತ್ತೇಳು ವರ್ಷ. 
ಇವರು ಸಂಪಾದಕರಾದ ಮೇಲೆ ಪ್ರಜಾವಾಣಿ ಹೊಸ ರೂಪ ತಾಳಿ ಜನಪ್ರಿಯವಾಯಿತು. ಇವರು ಪ್ರಾರಂಭಿಸಿದ ಛೂಬಾಣ - ವಿಶಿಷ್ಟವಾದ ವ್ಯಂಗ್ಯ, ವಿಡಂಬನೆಯ ಹಾಸ್ಯದ ಲೇಪ ಹೊತ್ತ ಮೊನಚು ಬಾಣವಾಗಿಯೇ ಇತ್ತು. ಅದು ಯಾರ ದಾಕ್ಷಿಣ್ಯಕ್ಕೂ ಕಟ್ಟುಬೀಳದೆ ಗುರಿ ಇಟ್ಟ ಕಡೆ ಚುಚ್ಚದೆ ಬಿಡುತ್ತಿರಲಿಲ್ಲ. ಪತ್ರಿಕೋದ್ಯಮದಲ್ಲಿ ಆ ಒಂದು ಬಗೆಯ ಬರೆಹವನ್ನು ಜಾರಿಗೆ ತಂದು ಜನಪ್ರಿಯತೆಗಳಿಸಿದರು. 27 ರರ್ಷಗಳಷ್ಟು ದೀರ್ಘಕಾಲ ಪ್ರಜಾವಾಣಿಯ ಸಂಪಾದಕರಾಗಿದ್ದರು. ಟಿಯೆಸ್ಸಾರ್ ಎಂದು ಜನಪ್ರಿಯರಾಗಿದ್ದ ಇವರು ಅನೇಕ ಬಾರಿ ವಿದೇಶ ಪ್ರವಾಸ ಕೈಕೊಂಡು ಅಪಾರ ಅನುಭವಗಳಿಸಿದರು. ಅದರ ಫಲ ಪ್ರಜಾವಾಣಿಯ ಮೂಲಕ ಕನ್ನಡ ಜನತೆಗೆ ಲಭ್ಯವಾಯಿತು. ಇವರ ಛೂಬಾಣದ ಬರೆಹಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ರಾಮಚಂದ್ರರಾಯರು 1977 ಏಪ್ರಿಲ್ 11 ರಂದು ನಿಧನರಾದರು.

ಪತ್ರಿಕೋದ್ಯಮಕ್ಕೆ ರಾಮಚಂದ್ರರಾಯರು ನೀಡಿರುವ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಸರ್ಕಾರ 1933ರಿಂದ ಜಾರಿಗೆ ಬರುವಂತೆ `ಟಿಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ರೂಪಿಸಿದೆ. ಮುದ್ರಣ ಮತ್ತು ವಿದ್ಯುನ್ಮಾನ ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿ ಮೀಸಲು. ಈ ವಾರ್ಷಿಕ ಪ್ರಶಸ್ತಿ ಮೊತ್ತ ರೂ. ಒಂದು ಲಕ್ಷ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ